ಸಿಂದಗಿ
	ಭಾರತದ ಕರ್ನಾಟಕ ರಾಜ್ಯದ ಬಿಜಾಪುರ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಈ ತಾಲ್ಲೂಕಿನ ದಕ್ಷಿಣಕ್ಕೆ ಬಸವನ ಬಾಗೇವಾಡಿ, ಪಶ್ಚಿಮಕ್ಕೆ ಬಿಜಾಪುರ, ವಾಯವ್ಯದಲ್ಲಿ ಇಂಡಿ ತಾಲ್ಲೂಕು, ಉತ್ತರ ಮತ್ತು ಪೂರ್ವಕ್ಕೆ ಗುಲ್ಬರ್ಗ ಜಿಲ್ಲೆಯ ಅಫಜಲಪುರ, ಜೇವರಗಿ ತಾಲ್ಲೂಕುಗಳೂ ಸುತ್ತುವರಿ ದಿವೆ. ಈ ತಾಲ್ಲೂಕು ಇಂಡಿ ವಿಭಾಗಕ್ಕೆ ಸೇರಿದೆ. ಆಲಮೇಲ, ಸಿಂದಗಿ ಮತ್ತು ದೇವರ ಹಿಪ್ಪರಗಿ ಈ ತಾಲ್ಲೂಕಿನ ಹೋಬಳಿಗಳು. 141 ಗ್ರಾಮಗಳಿರುವ ಈ ತಾಲ್ಲೂಕಿನ ವಿಸ್ತೀರ್ಣ 2,180.8 ಚ.ಕಿಮೀ. ಜನಸಂಖ್ಯೆ 3,26,346.

	ಈ ತಾಲ್ಲೂಕು ದಖನ್ ಪ್ರಸ್ಥಭೂಮಿಯ ಮಧ್ಯದಲ್ಲಿರುವ ಅರೆ ಒಣ ಪ್ರದೇಶ. ಉತ್ತರದಲ್ಲಿ ಭೀಮಾ ಮತ್ತು ದಕ್ಷಿಣದಲ್ಲಿ ಡೋಣಿ ನದಿಗಳ ನಡುವಿರುವ ಈ ತಾಲ್ಲೂಕಿನಲ್ಲಿ ವಿಸ್ತಾರ ಬಯಲುಗಳು ಮತ್ತು ಅಲ್ಲಲ್ಲಿ ಸಣ್ಣ ಗುಡ್ಡಗಳು ಇವೆ. ಕಡಿಮೆ ಪ್ರಮಾಣದ ಮಳೆ ಮತ್ತು ಹಿಂದಿನಿಂದಲೂ ವ್ಯಾಪಕ ಸಾಗುವಳಿಗೆ ಒಳಗಾಗದ ಈ ತಾಲ್ಲೂಕಿನಲ್ಲಿ ಸಸ್ಯ ಸಂಪತ್ತು ವಿರಳ. ಗುಡ್ಡ ಪ್ರದೇಶಗಳಲ್ಲಿ ಕುರುಚಲು ಕಾಡು ಕಂಡುಬರುತ್ತದೆ. ಭೀಮಾ ಮತ್ತು ಡೋಣಿ ನದಿಗಳನ್ನು ಸೇರುವ ಅನೇಕ ತೊರೆಗಳಿಂದ ಭೂಪ್ರದೇಶದಲ್ಲಿ ಅಲ್ಲಲ್ಲಿ ಉಂಟಾಗಿರುವ ಸಣ್ಣ ಕಣಿವೆಗಳು ವ್ಯವಸಾಯ ಯೋಗ್ಯ ಪ್ರದೇಶಗಳಾಗಿವೆ. ಭೀಮಾ ನದಿಯ ಸುತ್ತಲ ಪ್ರದೇಶ ಕಪ್ಪುಮಣ್ಣಿನಿಂದ ಕೂಡಿದ್ದು ಫಲವತ್ತಾಗಿದೆ. ಕಣಿವೆ ಪ್ರದೇಶಗಳ ಹೊರತು ಮಿಕ್ಕ ಪ್ರದೇಶಗಳಲ್ಲಿ ಅಲ್ಪ ಸಸ್ಯವರ್ಗದ ಬೋಳು ಬಯಲುಗಳಿವೆ. ಇಲ್ಲಿನ ಬಂಡೆಗಳು ಬೆಣಚುಕಲ್ಲು ವರ್ಗಕ್ಕೆ ಸೇರಿದವು.

	ಭೀಮಾ ನದಿ ಈ ತಾಲ್ಲೂಕಿನ ಉತ್ತರದಲ್ಲಿ ಪೂರ್ವಾಭಿಮುಖವಾಗಿ, ಅನಂತರ ಸ್ವಲ್ಪ ದೂರ ಆಗ್ನೇಯಾಭಿಮುಖವಾಗಿ ಹರಿದು ಗುಲ್ಬರ್ಗ ಜಿಲ್ಲೆಯ ಅಫಜಲಪುರ ತಾಲ್ಲೂಕನ್ನು ಬೇರ್ಪಡಿಸಿದೆ. ದಕ್ಷಿಣದಲ್ಲಿ ಡೋಣಿ ನದಿ ಪೂರ್ವಾಭಿಮುಖವಾಗಿ ಹರಿಯುವುದಲ್ಲದೆ ಸ್ವಲ್ಪದೂರ ಬಸವನ ಬಾಗೇವಾಡಿ ತಾಲ್ಲೂಕನ್ನು ಬೇರ್ಪಡಿಸಿದೆ. ಮುಂದೆ ಮತ್ತೆ ತಾಲ್ಲೂಕಿನ ಒಳಗೆ ಸ್ವಲ್ಪದೂರ ಹರಿದು ಅನಂತರ ಬಸವನ ಬಾಗೇವಾಡಿ ತಾಲ್ಲೂಕನ್ನು ಪ್ರವೇಶಿಸುವುದು. ಈ ನದಿಯ ಎಡದಂಡೆ ಪ್ರದೇಶ ಮತ್ತು ಭೀಮಾ ನದಿಯ ಬಲದಂಡೆ ಪ್ರದೇಶ ಸಿಂದಗಿ ತಾಲ್ಲೂಕಿಗೆ ಸೇರಿದ್ದು ದಂಡೆಯ ಜಮೀನುಗಳಿಗೆ ಪ್ರವಾಹ ಕಾಲದಲ್ಲಿ ಮೆಕ್ಕಲು ಮಣ್ಣು ತೂರುವುದರಿಂದ ವ್ಯವಸಾಯಕ್ಕೆ ಉತ್ತಮ ಪ್ರದೇಶವಾಗಿದ್ದು ಫಲವತ್ತಾಗಿವೆ. ಇವಲ್ಲದೆ ನಾವಲಿ ಮತ್ತು ಹೆಬ್ಬಾಲ ನದಿಗಳು ಈ ತಾಲ್ಲೂಕಿನಲ್ಲೆ ಹುಟ್ಟಿ ಭೀಮಾ ನದಿಯನ್ನು ಸೇರುವುವು.

	ಈ ತಾಲ್ಲೂಕಿನಲ್ಲಿ ಮಳೆ ಕಡಿಮೆ. ವಾರ್ಷಿಕ ಸರಾಸರಿ ಮಳೆ 675.66 ಮಿಮೀ. ಜೂನ್‍ನಿಂದ ಸೆಪ್ಟೆಂಬರ್‍ವರೆಗೆ ಮಳೆಗಾಲ. ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಈಶಾನ್ಯ ಮಾರುತದಿಂದ ಸ್ವಲ್ಪ ಪ್ರಮಾಣದ ಮಳೆಯಾಗುತ್ತದೆ. ವರ್ಷದಿಂದ ವರ್ಷಕ್ಕೆ ಇಲ್ಲಿನ ಮಳೆಯ ಪ್ರಮಾಣದಲ್ಲಿ ಅಧಿಕ ಏರಿಳಿತ ಕಂಡುಬರುತ್ತದೆ.

	ಈ ತಾಲ್ಲೂಕಿನ ಬೆಳೆಗಳಲ್ಲಿ ಜೋಳ, ಸಜ್ಜೆ, ಬತ್ತ, ಮೆಕ್ಕೆಜೋಳ, ನೆಲಗಡಲೆ, ಮೆಣಸಿನಕಾಯಿ ಮುಖ್ಯವಾದುವು. ಕಬ್ಬು, ಗೋದಿ, ಹುರುಳಿ ಮತ್ತು ಕುಸುಬೆಯನ್ನೂ ಬೆಳೆಯುತ್ತಾರೆ. ಹತ್ತಿ ಇಲ್ಲಿನ ಮುಖ್ಯ ವಾಣಿಜ್ಯ ಬೆಳೆ.

	ಈ ತಾಲ್ಲೂಕು ಕೈಗಾರಿಕೆಯಲ್ಲಿ ಅಷ್ಟಾಗಿ ಮುಂದುವರಿದಿಲ್ಲ. ಹತ್ತಿ ಬೆಳೆಯುವ ಈ ಪ್ರದೇಶದಲ್ಲಿ ಹತ್ತಿ ಆಧರಿಸಿದ ಕೈಗಾರಿಕೆಗಳೇ ಹೆಚ್ಚು. ತಾಲ್ಲೂಕಿನಲ್ಲಿ ಹತ್ತಿ ಹದಮಾಡುವ ಎರಡು ಕಾರ್ಖಾನೆಗಳಿವೆ. ಕೈಮಗ್ಗಗಳು, ಯಂತ್ರ ಮಗ್ಗಗಳೂ ಇವೆ. ಇವುಗಳಲ್ಲದೆ ಮರ, ಚರ್ಮದ ಕೆಲಸಗಳ ಉದ್ಯಮಗಳಿವೆ. ಮಡಕೆ ಮಾಡುವುದು, ಪಾತ್ರೆ ತಯಾರಿಕೆ, ಗಾಡಿ ಕಟ್ಟುವುದು, ಕಬ್ಬಿಣದ ಕೆಲಸ ಮೊದಲಾದವು ಇತರ ಗೃಹ ಕೈಗಾರಿಕೆಗಳು.

	ಈ ತಾಲ್ಲೂಕಿನಲ್ಲಿ ಕೆಲವು ಪ್ರಾಚೀನ ದೇವಾಲಯಗಳೂ ಐತಿಹಾಸಿಕ ಸ್ಥಳಗಳು ಇವೆ. ಅವುಗಳಲ್ಲಿ ಆಲಮೇಲ ಗ್ರಾಮ ಕಳಚುರಿ ರಾಜ ಬಿಜ್ಜಳನ ಕಾಲದಲ್ಲಿ ಸ್ಥಾಪನೆಯಾದದ್ದೆಂದು ತಿಳಿದುಬರುತ್ತದೆ. ಇಲ್ಲಿನ ರಾಮದೇವ ದೇವಾಲಯದಲ್ಲಿ ಅಮೃತಶಿಲೆಯ ರಾಮ, ಸೀತೆ ಮತ್ತು ಲಕ್ಷ್ಮಣರ ವಿಗ್ರಹಗಳಿವೆ. ಹಿಪ್ಪರಗಿ ಪ್ರಸಿದ್ಧ ವಚನಕಾರ ಮಡಿವಾಳ ಮಾಚಯ್ಯನ ಊರು. ಇಲ್ಲಿ ಜಮದಗ್ನಿ ಋಷಿಯಿಂದ ಸ್ಥಾಪಿತವಾದದ್ದೆನ್ನಲಾದ ಕಾಳಮೇಶ್ವರ ದೇವಾಲಯದಲ್ಲಿ ಲಿಂಗವಿದೆ. ಇಲ್ಲಿ ಕಾರ್ತೀಕದಲ್ಲಿ ಕಾಳಮೇಶ್ವರ ಜಾತ್ರೆ ನಡೆಯುತ್ತದೆ. ಚಟ್ಟರ್ಕಿ, ದೇವಗಾಂವ, ಕೊರವಾರ, ಗೊಲ್ಲಗೇರಿಗಳಲ್ಲಿ ಹಳೆಯ ದೇವಾಲಯಗಳಿವೆ. ಕೊರವಾರದಲ್ಲಿ ಚೈತ್ರಮಾಸದಲ್ಲಿ ರಥೋತ್ಸವ ನಡೆಯುತ್ತದೆ.

	ಸಿಂದಗಿ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಬಿಜಾಪುರದ ಈಶಾನ್ಯಕ್ಕೆ 60 ಕಿಮೀ ದೂರದಲ್ಲೂ ಇಂಡಿಗೆ ಆಗ್ನೇಯದಲ್ಲಿ 50 ಕಿಮೀ ದೂರದಲ್ಲೂ ಇದೆ. ಜನಸಂಖ್ಯೆ 27,749.	
				
	*
	ಈ ಊರನ್ನು ಸು. 1200ರಲ್ಲಿ ಸಿಂದ ಬಲ್ಲಾಳನೆಂಬುವ ಸ್ಥಾಪಿಸಿದನೆಂದು ತಿಳಿದುಬರುತ್ತದೆ. ಇದಕ್ಕೆ ಹಿಂದೆ ಸಿಂದಪುರವೆಂದು ಹೆಸರಿತ್ತು. ಊರ ದಕ್ಷಿಣಕ್ಕಿರುವ ಸಂಗಮೇಶ್ವರ ದೇವಾಲಯ ಪ್ರಸಿದ್ಥವಾದುದು. ಈ ದೇವಾಲಯದ ಆವರಣದಲ್ಲಿ ಭ್ರಮರಾಂಬಿಕ ದೇವತೆಯ ಗುಡಿ ಇದೆ. ಈ ಊರಿನ ಇನ್ನೊಂದು ಆಕರ್ಷಕ ಸ್ಥಳ ಜಕ್ಕಪ್ಪಯ್ಯನ ಮಠ. ಇಲ್ಲಿ ಪ್ರತಿವರ್ಷ ಜಾತ್ರೆ ನಡೆಯುತ್ತದೆ. ಈ ಊರಲ್ಲಿ ನೀಲಗಂಗಮ್ಮ (ಭಾಗೀರಥಿ) ದೇವಾಲಯವಿದೆ.
				
	(ಎನ್.ಸಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ